ಯೆಹೋವ
ಕ್ರೈಸ್ತರ ಧರ್ಮಗ್ರಂಥವಾದ ಬೈಬಲಿನ ಹಳೆಯ ಒಡಂಬಡಿಕೆಯಲ್ಲಿ ದೇವರನ್ನು ಹೆಸರಿಸಿರುವ ಒಂದು ಪದ. ದೇವರನ್ನು ಸಂಬೋಧಿಸುವ ಯಾವೆ ಎಂಬ ಹೆಸರಿನಿಂದ ಇದು ಬಂದಿದೆ. ಈ ಹೆಸರು ಮೊದಲಿಗೆ ಕ್ರಿ.ಶ. 13 ನೆಯ ಶತಮಾನದ ಹಸ್ತಪ್ರತಿಗಳಲ್ಲಿ ಕಾಣಿಸಿಕೊಂಡಿದೆ. ಭಗವಂತನ ಹೆಸರನ್ನು ಅಪವಿತ್ರಗೊಳಿಸಬಾರದೆಂಬ ಉದ್ದೇಶದಿಂದ ಶ್ರದ್ಧಾಭಕ್ತಿಯುಳ್ಳ ಯೆಹೂದಿ ಲಿಪಿಕಾರರಿಂದ ಈ ರೂಪ ಹುಟ್ಟಿಕೊಂಡಿದೆ. ಪ್ರಾಚೀನ ಹೀಬ್ರೂಗಳು ಯೆಹೋವ ಒಬ್ಬನೇ ತಮ್ಮ ಏಕಮಾತ್ರ ದೇವರೆಂದು ನಂಬಿದ್ದರು. ಮೋಶೆಯ ಕಾಲದ ಅನಂತರ ವಿಶೇಷವಾಗಿ ಸ್ಯಾಮುಯೆಲ್‍ನಂಥ ಮಹಾಪ್ರವಾದಿಗಳ ಕಾಲದಲ್ಲಿ ಯೆಹೋವ ವಿಶ್ವದ ದೇವನಾಗಿ, ಎಲ್ಲ ಮಾನವರ ತಂದೆಯಾಗಿ, ಋಜುಮಾರ್ಗದ ಮೂಲಪುರುಷನಾಗಿ ಪರಿಗಣಿತನಾದ. ಕ್ರಿ.ಪೂ.3 ನೆಯ ಶತಮಾನದ ಸಮಯದ ಸುಮಾರಿನಲ್ಲಿ ಕೀರ್ತನಕಾರರು `ಯಾವೆ ಎಂಬುದರ ಬದಲಿಗೆ `ಲಾರ್ಡ್ ಅರ್ಥದ `ಅಡೊನಾಯ್ ಹಾಗೂ `ಗಾಡ್ ಅರ್ಥದ `ಎಲೀಹಿಮ್ ಪದಗಳನ್ನು ಪದೇ ಪದೇ ಬಳಸಿದರು. ಸ್ವರಚಿಹ್ನೆಗಳನ್ನು ಕಂಡು ಹಿಡಿದ ಅನಂತರ ಅಡೊನಾಯ್ ಪದದ ಸ್ವರಗಳನ್ನು ಪವಿತ್ರ ಹೆಸರಾದ ಯಾವೆ ಪದದ ವ್ಯಂಜನಗಳ ಅಡಿಯಲ್ಲಿ ಬರೆಯಲಾಯಿತು. ಕ್ರಮೇಣ ಯಾವೆ ಪದದ ಉಚ್ಚಾರ ಮರೆತುಹೋಯಿತು. ಅಡೊನಾಯ್ ಪದದ ಸ್ವರಗಳೊಂದಿಗೆ ಯಾವೆ ಪದದ ವ್ಯಂಜನಗಳನ್ನು ಉಚ್ಚರಿಸುವುದರೊಂದಿಗೆ ಯೆಹೋವ ಅಥವಾ ಜಿಹೋವ ಎಂಬ ಮಿಶ್ರಪದ ರೂಪುಗೊಂಡಿತು. ಪದದ ಆದಿಯ ಹ್ರಸ್ವ ಅ > ಎ ಆಗಿ ಬದಲಾವಣೆ ಹೊಂದಿ ವ್ಯಾಪಕವಾಗಿ ಚಾಲ್ತಿಗೆ ಬಂದಿತು. ಯೆಹೋವ ಎಂಬುದು ರಿಡೀಮರ್ ಎಂಬ ಪದದಷ್ಟೇ ಮಹತ್ತ್ವದ ಅರ್ಥವನ್ನು ಹೊಂದಿದೆ.				
(ಡಿ.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ